ಪೈನಸ್ ಅನಾವೃತ ಬೀಜಸಸ್ಯ.  ಕುಟುಂಬ ಪೈನೇಸೀಗೆ ಸೇರಿದ ಸುಂದರ ಅರಣ್ಯ ವೃಕ್ಷಜಾತಿ.  ಸಮಶೀತೋಷ್ಣ ಪ್ರದೇಶದ ಬೆಟ್ಟಗಳಲ್ಲಿ ಇದು ಹೇರಳವಾಗಿದೆ.  ಭಾರತದ ಅಸ್ಸಾಮ್ ಮತ್ತು ಹಿಮಾಲಯದ ಬೆಟ್ಟ ಪ್ರದೇಶಗಳಲ್ಲಿ ಇದರ ಐದು ಪ್ರಭೇದಗಳು ಬೆಳೆಯುತ್ತವೆ. ಸಮುದ್ರ ಮಟ್ಟಕ್ಕಿಂತ ಅತಿ ಎತ್ತರ ಪ್ರದೇಶಗಳಲ್ಲಿ ಇವು ಹುಲುಸಾಗಿ ಬೆಳೆಯಬಲ್ಲವು.
ಭಾರತದಲ್ಲಿ ಬೆಳೆಯುವ ಪ್ರಭೇದಗಳು

1.  ಪೈ. ಗೆರಾರ್ಡಿಯಾನ	ಗರ್ವಾಲದ ಪಶ್ಚಿಮದಿಂದ ವಾಯುವ್ಯ ಹಿಮಾಲಯದ ಕಣಿವೆಗಳಲ್ಲಿ ಸಮುದ್ರ ಮಟ್ಟಕ್ಕಿಂತ 1500-3000 ಮೀ. ಎತ್ತರದಲ್ಲಿ ಬೆಳೆಯುತ್ತವೆ.
2.  ಪೈ. ಇನ್ಸುಲಾರಿಸ್	ಲುಫೈ, ಮಣಿಪುರ ಮತ್ತು ನಾಗಾ ಬೆಟ್ಟಗಳಲ್ಲಿ ಬಲು ಸಾಮಾನ್ಯ. ಸಮುದ್ರ ಮಟ್ಟಕ್ಕಿಂತ 800-2400 ಮೀ. ಎತ್ತರದಲ್ಲಿ ಬೆಳೆಯುತ್ತವೆ.
3.  ಪೈ. ರಾಕ್ಸಬರ್ಗಿಯೈ	ಕಾಶ್ಮೀರದಿಂದ ಭೂತಾನದವರೆಗಿನ ಹಿಮಾಲಯ ಕಣಿವೆ ಹಾಗೂ ಶಿವಾಲಿಕ್ ಬೆಟ್ಟಗಳಲ್ಲಿ 450-2400 ಮೀ. ಎತ್ತರದ ಪ್ರದೇಶದಲ್ಲಿ ಕಾಣದೊರೆಯುತ್ತದೆ.
4. ಪೈ. ವೆಲಾಚಿಯಾನ	ಅಸ್ಸಾಮಿನ ಬಲಿಪಾಕ ಬೆಟ್ಟಗಳು, ಕಾಶ್ಮೀರದಿಂದ ಭೂತಾನದವರೆಗಿನ ಹಿಮಾಲಯದ ಕಣಿವೆಗಳಲ್ಲಿ 1800-3700 ಮೀ. ಎತ್ತರ ಪ್ರದೇಶದಲ್ಲಿ ಬೆಳೆಯುತ್ತದೆ.
5.  ಪೈ. ಮೆಕ್ರ್ಯೂಸಿಯೇ	ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸವೆದ ಬೆಟ್ಟದ ತಪ್ಪಲಲ್ಲಿ ಬೆಳೆಸುವ ಪ್ರಯತ್ನ ನಡೆದಿದೆ.

ಪೈನಸ್ ಪ್ರಭೇದಗಳು ತುಂಬ ಎತ್ತರಕ್ಕೆ ಬೆಳೆಯುವಂಥವು.  ಸಾಮಾನ್ಯವಾಗಿ 30-60 ಮೀಟರ್ ಎತ್ತರಕ್ಕೆ ಬೆಳೆಯುವುವು.  ಇವುಗಳಲ್ಲಿ ಕವಲೊಡೆಯದ ಕಂಬದಂಥ ಮುಖ್ಯ ಕಾಂಡವಿದ್ದು ಅದರ ಮೇಲೆ ಕೊಂಬೆಗಳು ಕಿರೀಟದಂತೆ ಹರಡಿಕೊಂಡಿರುವುವು.  ಎಲ್ಲ ಕೊಂಬೆಗಳು ಹಾಗೆಯೇ ಉಳಿದಿದ್ದಾಗ ಮರ ಗೋಪುರದಂತೆ ಕಾಣುತ್ತದೆ. ಕೊಂಬೆಗಳಲ್ಲಿ ಎರಡುವಿಧ-ಅನಿರ್ದಿಷ್ಟ ಬೆಳವಣಿಗೆಯುಳ್ಳ ನೀಳ ಕಾಂಡಗಳು ಹಾಗೂ ಇವುಗಳ ಮೇಲೆ ಬೆಳೆಯುವ ನಿರ್ದಿಷ್ಟ ಬೆಳವಣಿಗೆಯುಳ್ಳ ಕುಬ್ಜ ಕಾಂಡಗಳು. ಎಲೆಗಳೂ ಎರಡು ತೆರನಾಗಿವೆ-ಸಣ್ಣ ಪೊದೆ ಎಲೆಗಳು ಹಾಗೂ ನೀಳವಾದ ಸೂಜಿಯಂಥ ಹಸುರೆಲೆಗಳು.  ಇವು ಸೂಜಿಗಳೆಂದೇ (ನೀಡ್ಲ್) ಪರಿಚಿತ.  ನೀಳ ಕಾಂಡಗಳಲ್ಲಿ ಹಸುರೆಲೆಗಳಿರುವುದಿಲ್ಲ.  ಕುಬ್ಜ ಕಾಂಡಗಳಲ್ಲಿ ನೀಳವಾದ ಸೂಜಿಯಂಥ ಹಸುರೆಲೆಗಳು ಎರಡರಿಂದ ಐದರ ಗುಂಪಿನಲ್ಲಿರುತ್ತವೆ.  ಸೂಜಿ ಎಲೆಗಳ ಸಂಖ್ಯೆ ಪ್ರಭೇದದಿಂದ ಪ್ರಭೇದಕ್ಕೆ ಬದಲಾಗುತ್ತದೆ.
ಪೈನಸಿನಲ್ಲಿ ಲಿಂಗಭೇದವಿದೆಯಾದರೂ ಗಂಡು ಮತ್ತು ಹೆಣ್ಣು ಶಂಕುಗಳು ಒಂದೇ ಗಿಡದಲ್ಲಿ ಬೆಳೆಯುತ್ತವೆ.  ಬೆಳೆಯುವ ಕಾಂಡದ ತುದಿಯ ಹಿಂಬದಿಯಲ್ಲಿ ಗಂಡು ಶಂಕುಗಳ ಗುಂಪಿದ್ದು, ಮೇ ಅಥವಾ ಜೂನ್ ಆದಿಭಾಗದಲ್ಲಿ ಈ ಮರಗಳು ಬೆಳೆಯುವ ಪ್ರದೇಶಗಳಲ್ಲಿ ಗಾಳಿಯೆಲ್ಲ ಇದರ ಅರಿಶಿನ ಬಣ್ಣದ ರೆಕ್ಕೆಯುಳ್ಳ ಪರಾಗಗಳಿಂದ ತುಂಬಿರುತ್ತದೆ.  ಹೆಣ್ಣು ಶಂಕುಗಳು ಒಂದರಿಂದ ಐದರ ಗುಂಪಿನಲ್ಲಿವೆ.  ಇವು ಪರಾಗಸ್ಪರ್ಶ ಆಗುವ ವರೆಗೆ ಮೇಲ್ಮೊಗನಾಗಿದ್ದು ಅನಂತರ ತೊಟ್ಟಿನ ಬೆಳವಣಿಗೆಯಿಂದ ಕೆಳಮುಖವಾಗಿ ಬಾಗುತ್ತವೆ.  ಗರ್ಭದಾರಣೆಯ ತರುವಾಯ ಅಂಡಕಪಟ್ಟಿ ಇಬ್ಭಾಗವಾಗಿ ಬೀಜದ ಮೇಲೆ ರೆಕ್ಕೆಯಾಗಿ ಉಳಿಯುತ್ತದೆ : ಇವುಗಳಲ್ಲಿ ಮೊದಲನೆಯ ವರ್ಷದಲ್ಲಿ ಪರಾಗಸ್ಪರ್ಶ ನಡೆಯುತ್ತದೆ.  ಎರಡನೆಯ ವರ್ಷದಲ್ಲಿ ಗರ್ಭಧಾರಣೆ ಕ್ರಿಯೆ ಜರುಗಿ, ಮೂರನೆಯ ವರ್ಷದಲ್ಲಿ ಬೀಜಗಳು ಬಲಿಯುತ್ತವೆ.

ಪೈನಸ್ ಪ್ರಭೇದಗಳು ಅತ್ಯಂತ ಉಪಯೋಗಿ ವೃಕ್ಷಗಳು.  ಬೀಜಗಳಲ್ಲಿ ಹೆಚ್ಚು ಮೊತ್ತದ ಮೇದಸ್ಸಿದೆ.  ಈ ವೃಕ್ಷಗಳು ಬೆಳೆಯುವ ಗುಡ್ಡಗಾಡು ಪ್ರದೇಶದ ಜನ ಪೈನಸ್ಸಿನ ಬೀಜಗಳನ್ನು ಆಹಾರವಾಗಿ ಸೇವಿಸುವರು.  ಇವನ್ನು ಹಸಿಯಾಗಿಯೋ ಹುರಿದೋ ತಿನ್ನುವುದುಂಟು.  ಆಫ್ಘಾನಿಸ್ತಾನದಿಂದ ಸಾಕಷ್ಟು ಬೀಜಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.  ಬೀಜಗಳಿಗೆ ವಾತಹರ, ಕಫ ಕತ್ತರಿಸುವ ಹಾಗೂ ಉತ್ತೇಜಕಾರಕ ಗುಣಗಳು ಇವೆ.
ಪೈನಸ್ ಮರಗಳ ತೊಗಟೆಯನ್ನು ಕೆತ್ತಿದಾಗ ಸ್ರವಿಸುವ ಓಲಿಯೋರೆಸಿóನ್ ಟರ್ಪೆಂಟೈನಿನ ಮೂಲ ವಸ್ತು.  ಕಚ್ಚಾ ಒಲಿಯೋರೆಸಿನ್ನನ್ನು ಆವಿ ಕವಚವುಳ್ಳ ಧಾರಕಗಳಲ್ಲಿ ಕುದಿಸಿ ಬಟ್ಟಿ ಇಳಿಸಿದಾಗ ಮೇಲ್ಪದರದಲ್ಲಿ ಟರ್ಪೆಂಟೈನ್ ಶೇಖರಣೆಯಾಗುತ್ತದೆ.  ಇದರಲ್ಲಿರುವ ರಸಿóನ್ ಆಮ್ಲಗಳನ್ನು ತೆಗೆಯಲು ಸುಣ್ಣದ ತಿಳಿಯಲ್ಲಿ ಹಾಯಿಸಿ ಅನಂತರ ಉಪ್ಪು ಮತ್ತು ಸೋಡಿಯಮ್ ಸಲ್ಫೇಟ್‍ಗಳ ಸಹಾಯದಿಂದ ಜಲಾಂಶವನ್ನು ತೆಗೆದುಹಾಕಿ ಶುದ್ಧ ಎಣ್ಣೆಯನ್ನು ಶೇಖರಿಸುತ್ತಾರೆ.  ಭಾರತದಲ್ಲಿ ತಯಾರಾಗುವ ಟರ್ಪೆಂಟೈನಿನಲ್ಲಿ ಪೈನಿನ್ ಅಂಶ ಕಡಿಮೆ ಇರುವುದರಿಂದ ಇದು ಅಮೆರಿಕನ್ ಟರ್ಪೆಂಟೈನಿಗಿಂತ ಕೆಳದರ್ಜೆಯದು ಎನ್ನಲಾಗಿದೆ.  ಹೈದರಾಬಾದಿನ ಪ್ರಾದೇಶಿಕ ಪರಿಶೋಧನಾ ಪ್ರಯೋಗಾಲಯ, ಕ್ಲೋರಿನ್‍ಯುಕ್ತ ಟರ್ಪೆಂಟೈನನ್ನು ತಯಾರಿಸುವ ವಿಧಾನವನ್ನು ಕಂಡುಹಿಡಿದಿದೆ.  ಇದು ಡಿóಡಿóಟಿಯಷ್ಟೇ ಪ್ರಬಲ ಕೀಟನಾಶಕವೆನಿಸಿದೆ.  ಬಣ್ಣ ಮತ್ತು ವಾರ್ನಿಷ್‍ಗಳನ್ನು ತೆಳು ಮಾಡಲು ಹಾಗೂ ಔಷಧಿ ಮತ್ತು ಸುಗಂಧ ದ್ರವ್ಯ ತಯಾರಿಕೆಯಲ್ಲಿ ಈ ಟರ್ಪೆಂಟೈನ್ ಅತ್ಯಂತ ಉಪಯುಕ್ತ.  ಟರ್ಪೆಂಟೈನ್ ಪಡೆದ ಮೇಲೆ ಘನರೂಪದಲ್ಲಿ ಶೇಷವಾಗಿ ಉಳಿಯುವ ರೆಸಿನನ್ನು ರಬ್ಬರ್ ಮತ್ತು ಪ್ಲಾಸ್ಟಿಕ್ ಕೈಗಾರಿಕೆಗಳಲ್ಲಿ ಉಪಯೋಗಿಸುತ್ತಾರೆ.

ಪೈನಸ್ ಮರದ ತುಂಡುಗಳನ್ನು ಆವಿಕವಚದ ಧಾರಕಗಳಲಿ ಕುದಿಸಿ ಪೈನ್ ಎಣ್ಣೆಯನ್ನು ಬಟ್ಟಿ ಇಳಿಸುತ್ತಾರೆ.  ಬಣ್ಣ, ವಾರ್ನಿಷ್, ಅರಗು, ಡಿಸ್ಟೆಂಪರ್, ಸಾಬೂನು, ಸುಗಂಧ ದ್ರವ್ಯಗಳ ಹಾಗೂ ಔಷಧಿಗಳ ತಯಾರಿಕೆಯಲ್ಲಿ ಇದು ಉಪಯೋಗಕರ. ಪೈನೆ ಎಲೆಗಳಿಂದ ಕೂಡ ಎಣ್ಣೆ ಪಡೆಯುವುದಿದೆ.

ಉತ್ತರ ಭಾರತದಲ್ಲಿ ಪೈನಸ್ ಮರಕ್ಕೆ ಬಹಳ ಬೇಡಿಕೆಯಿದೆ.  ಇದು ಸುಲಭ ದರದಲ್ಲಿ ದೊರೆಯುವ ಉಪಯುಕ್ತ ಮರ.  ವಿದ್ಯುತ್ ಕಂಬ ಸಾಮಾನು ತುಂಬುವ ಪೆಟ್ಟಿಗೆಗಳು, ಕಮ್ಮಿ ದರ್ಜೆಯ ಪೀಠೋಪಕರಣಗಳು ಮತ್ತು ಮನೆ ಕಟ್ಟುವ ಸಾಮಾನುಗಳ ತಯಾರಿಕೆಯಲ್ಲಿ ಇದು ಬಳಕೆಗೆ ಬರುತ್ತದೆ.  ರಕ್ಷಕ ರಾಸಾಯನಿಕಗಳಿಂದ ಇದನ್ನು ಸಂಸ್ಕರಿಸಿ ರೈಲ್ವೆ ಸ್ಲೀಪರುಗಳನ್ನು ತಯಾರಿಸುವುದುಂಟು.  ಅದರೆ, ಮರದ ತಾಳಿಕೆ ಕಡಿಮೆ.  ಸುರುಟಿಕೊಂಡ ಮರದಿಂದ ಇಜ್ಜಲು ಮಾಡುವುದಿದೆ.  ಕಾಗದದ ತಯಾರಿಕೆಯಲ್ಲೂ ಇದು ಅತ್ಯಂತ ಉಪಯೋಗಿ ಕಚ್ಚಾ ಪದಾರ್ಥ ; ಮರದಲ್ಲಿ ನೀಳ ನಾರುಗಳಿರುವುದರಿಂದ ಹೊದಿಕೆ ಕಾಗದಗಳ ತಯಾರಿಕೆಗೆ ಒಳ್ಳೆಯದು ಎನ್ನಲಾಗಿದೆ.

ಮರದ ತೊಗಟೆಯಿಂದ ಸಣ್ಣಪುಟ್ಟ ಅಲಂಕಾರ ವಸ್ತುಗಳನ್ನು ತಯಾರಿಸಬಹುದು; ಸದ್ಯಕ್ಕೆ ನಿರುಪಯುಕ್ತ ಎನಿಸಿಕೊಂಡು ಉರುವಲಾಗಿ ಬಳಕೆಯಾಗುತ್ತಿರುವ ಇದರಿಂದ ಲಾಭದಾಯಕ ಕುಶಲ ಕೈಗಾರಿಕೆ ಸಾಧ್ಯ.
(ಟಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ